ಜಗಳೂರು
ಕರ್ನಾಟಕ ರಾಜ್ಯದ ದಾವಣಗೆರೆ ಜಿಲ್ಲೆಯಲ್ಲಿರುವ ಒಂದು ತಾಲ್ಲೂಕು; ಅದರ ಕೇಂದ್ರ. ದಾವಣಗೆರೆ ಉಪವಿಭಾಗಕ್ಕೆ ಸೇರಿದೆ. ಉತ್ತರದಲ್ಲಿ ಬಳ್ಳಾರಿ ಜಿಲ್ಲೆಯ ಕೂಡ್ಲಿಗಿ ತಾಲ್ಲೂಕು, ಪೂರ್ವದಲ್ಲಿ ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲ್ಲೂಕು, ದಕ್ಷಿಣದಲ್ಲಿ ಚಿತ್ರದುರ್ಗ ತಾಲ್ಲೂಕು, ಪಶ್ಚಿಮದಲ್ಲಿ ಬಳ್ಳಾರಿ ಜಿಲ್ಲೆಯ ಹರಪನಹಳ್ಳಿ ಮತ್ತು ಚಿತ್ರದುರ್ಗ ಜಿಲ್ಲೆಯ ದಾವಣಗೆರೆ ತಾಲ್ಲೂಕುಗಳ ಇದರ ಮೇರೆಗಳು. 1882ರ ವರೆಗೂ ಇದಕ್ಕೆ ಕನಕುಪ್ಪ ಎಂಬ ಹೆಸರಿತ್ತು. ಜಗಳೂರು, ಸೊಕ್ಕೆ, ಬಿಳಿಚೊಡು ಹೋಬಳಿಗಳೂ 128 ಹಳ್ಳಿಗಳೂ ಇಂದು ಪಟ್ಟಣವೂ ಇರುವ ಜಗಳೂರು ತಾಲ್ಲೂಕಿನ ವಿಸ್ತೀರ್ಣ 371.4 ಚ.ಮೈ. (961.9 ಚ.ಕಿಮೀ.) ಜನಸಂಖ್ಯೆ 1,58,829 (2001).

ತಾಲ್ಲೂಕಿನ ವಾಯುವ್ಯ ಭಾಗದಲ್ಲಿ ಅನೇಕ ಸಣ್ಣ ಬೆಟ್ಟಗುಡ್ಡಗಳಿವೆ. ಈ ಭಾಗ ಕುರುಚಲು ಮತ್ತು ಪರ್ಣಪಾತಿ ಮರಗಳಿಂದ ಆವೃತ. ಉಳಿದ ಭಾಗದಲ್ಲಿ ಅಲೆಯಲೆಯಾಗಿ ಏರಿಳಿಯುವ ನೆಲವಿದೆ. ಒಟ್ಟಿನಲ್ಲಿ ಇದು ಮೈದಾನ. ತಾಲ್ಲೂಕಿನ ಕೃಷಿಯೋಗ್ಯ ನೆಲದ ಕಾಲುಭಾಗದಲ್ಲಿ ಕಪ್ಪು ಅಥವಾ ಕಂದು ಬಣ್ಣದ ಮಣ್ಣಿದೆ. ಉಳಿದ ಭಾಗ ಕೆಂಪು ಅಥವಾ ಮರಳು ನೆಲ. ಇದು ಅಷ್ಟೇನೂ ಫಲವತ್ತಾದ್ದಲ್ಲ.

ಚಿತ್ರದುರ್ಗ ತಾಲ್ಲೂಕಿನ ಭೀಮಸಮುದ್ರ ಕೆರೆಯಿಂದ ಹೊರಡುವ ಜನಗಳುಳ್ಳ ಈ ತಾಲ್ಲೂಕಿನ ಪೂರ್ವದ ಕೆಲವು ಗ್ರಾಮಗಳ ಮೂಲಕ ಹರಿಯುತ್ತದೆ. ಇದು ವ್ಯವಸಾಯಕ್ಕೆ ಅನುಕೂಲಕರ. ತಾಲ್ಲೂಕಿನ ಉಳಿದ ಭಾಗಗಳಲ್ಲಿ ನೀರಿನ ಆಸರೆ ಹೆಚ್ಚಾಗಿಲ್ಲ. ಮಳೆ ಕಡಿಮೆ 7-8 ದೊಡ್ಡ ಕೆರೆಗಳೂ ಹಲವು ಸಣ್ಣ ಕೆರೆಗಳೂ ಇವೆ. ತಾಲ್ಲೂಕಿನ ನಡುವೆ ನೈಋತ್ಯದಿಂದ ಈಶಾನ್ಯಕ್ಕೆ ಸಾಗಿರುವ ಉಬ್ಬು ನೆಲದ ನೆತ್ತಿರೇಖೆಯಿಂದ ಆಚೀಚೆ ವಾಯುವ್ಯ ಮತ್ತು ಆಗ್ನೇಯಾಭಿಮುಖವಾಗಿ ಹರಿಯುವ ಸಣ್ಣ ಪುಟ್ಟ ಹಳ್ಳಗಳು ಬಾವಿಗಳಿಗೆ ನೀರು ಪೂರೈಸುತ್ತವೆ; ಆಗ್ನೇಯದ ಹಳ್ಳಗಳು ಜನಗುಹಳ್ಳಕ್ಕೆ ನೀರು ಊಡುತ್ತವೆ. ಜನಗುಹಳ್ಳದ ಆಚೀಚೆ ದಡಗಳ ಮೇಲೆ ತೋಡಿರುವ ಕಪಿಲೆ ಬಾವಿಗಳು ನೀರಾವರಿಗೆ ಸಹಾಯಕ.

ಹತ್ತಿ, ಬತ್ತ, ಕಬ್ಬು, ನವಣೆ, ಜೋಳ, ರಾಗಿ, ತೆಂಗು, ಅಡಕೆ ಇಲ್ಲಿಯ ಮುಖ್ಯ ಬೆಳೆಗಳು. ಕೆಲವು ಕಡೆ ವರ್ಷದಲ್ಲಿ ಎರಡು ಫಸಲನ್ನು ತೆಗೆಯುತ್ತಾರೆ.

ಜಗಳೂರು ಪಟ್ಟಣ ಈ ತಾಲ್ಲೂಕಿನ ಕಸಬೆ. ಉ.ಅ. 14ಲಿ 31' ಮತ್ತು ಪೂ.ರೇ. 76ಲಿ 24' ಮೇಲೆ ಚಿತ್ರದುರ್ಗದ ವಾಯುವ್ಯಕ್ಕೆ 40 ಕಿ.ಮೀ. ದೂರದಲ್ಲಿದೆ. ಇದೊಂದು ಪೌರಸಭಾ ಪಟ್ಟಣ. ಕನಕುಪ್ಪದಿಂದ ಇಲ್ಲಿಗೆ ತಾಲ್ಲೂಕು ಆಡಳಿತ 1868ರಲ್ಲಿ ವರ್ಗವಾಯಿತು. ಜೋಗಪ್ಪ ಎಂಬ ಋಷಿಯಿಂದ ಇದಕ್ಕೆ ಜಗಳೂರು ಎಂದು ಹೆಸರು ಬಂದಿದೆಯೆಂದು ಹೇಳಲಾಗಿದೆ. ಇಲ್ಲಿ ಜೋಗಪ್ಪನ ದೇವಸ್ಥಾನವೊಂದಿದೆ. ಅಲ್ಲಿರುವ ಜೋಗಪ್ಪನ ವಿಗ್ರಹದ ಎತ್ತರ 3'. ಇದು ಬಲಗೈಯಲ್ಲಿ ತ್ರಿಶೂಲವನ್ನೂ ಎಡಗೈಯಲ್ಲಿ ಕಮಂಡಲವನ್ನೂ ಹಿಡಿದಿದೆ. ಇಲ್ಲಿರುವ ಇನ್ನೊಂದು ಗುಡಿ ತಮ್ಮವ್ವನದು. ಜಗಳೂರಿನಲ್ಲಿ ವೀರಶೈವರ ಒಂದು ಕಲ್ಲುಮಠವುಂಟು. ಅದರಲ್ಲಿ ತೋಟದ ಸ್ವಾಮಿಗಳ ಗದ್ದಿಗೆ ಇದೆ. ಪಟ್ಟಣಕ್ಕೆ ಎರಡು ಸುರಂಗ ಬಾವಿಗಳಿಂದ ನೀರು ಒದಗಿಸಲಾಗುತ್ತಿದೆ. ವಿದ್ಯುತ್‍ಸೌಕರ್ಯವಿದೆ. ಪುರಸಭೆ ಇಲ್ಲಿ ಒಂದು ಪ್ರೌಢಶಾಲೆ ನಡೆಸುತ್ತಿದೆ. ಆಸ್ಪತ್ರೆಯಿದೆ. ಪಟ್ಟಣದ ಜನಸಂಖ್ಯೆ 14,741 (2001).								(ಎಂ.ಎ.ಎಚ್.)
	
ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ